ಲೋಹಗಳ ಅಥವಾ ಖನಿಜಗಳ ಚಲನೆಯ ಸಂಬಂಧವಾಗಿಯೂ ವಿಜ್ಞಾನಿಗಳು ರಿಂಗಿಂಗ್ ಪ್ರಯೋಗಗಳನ್ನು ಮಾಡಿದ್ದಾರೆ. ಇತ್ತೀಚೆಗೆ ರೇಡಿಯೊ ಸಮಸ್ಥಾನಿಗಳು (ಐಸೊಟೋಪುಗಳು) ಅದರಲ್ಲೂ ವಿಕಿರಣಶೀಲ ಪೊಟ್ಯಾಸಿಯಂನ್ನು ಪ್ರಯೋಗಗಳಲ್ಲಿ ಉಪಯೋಗಿಸಿದ್ದಾರೆ. ಸೈಲೆಂ ರಸವನ್ನೂ ತೆಗೆದು ಪರೀಕ್ಷಿಸಲಾಗಿದೆ. ಸೈಲೆಂ ರಸದಲ್ಲಿ ಲೋಹಗಳು, ಅಮೈನೋ ಆಮ್ಲಗಳು ಮತ್ತು ಅತಿ ಸಣ್ಣ ಪ್ರಮಾಣದಲ್ಲಿ ಅನೇಕ ವೇಳೆ ಸಕ್ಕರೆಗಳೂ ಕಂಡುಬಂದಿವೆ. ಫ್ಲೋಯೆಂ ರಸದಲ್ಲಿ ಕಾರ್ಬೊಹೈಡ್ರೇಟುಗಳು, ಅಮೈನೋ ಆಮ್ಲಗಳು ಮತ್ತು ಸಣ್ಣ ಪ್ರಮಾಣದಲ್ಲಿ ಲೋಹಗಳು ಕಂಡುಬಂದಿವೆ. ಲೋಹಗಳ ಚಲನೆಯ ಬಲುಭಾಗ ಸೈಲೆಂ ಮುಖಾಂತರ ನಡೆದರೂ ಸ್ವಲ್ಪಭಾಗವಾದರೂ ಫ್ಲೋಯೆಂ ಮುಖಾಂತರ ನಡೆಯಬಹುದೆಂದು ಪರಿಗಣಿಸಲಾಗಿದೆ. ಲೋಹಗಳ ಚಲನೆಯನ್ನು ಕೆಳಗೆ ಸೂಚಿಸಿರುವಂತೆ ಸಂಕ್ಷೇಪಿಸಬಹುದು. ಬೇರಿನಿಂದ ತೆಗೆದುಕೊಂಡ ಮೇಲೆ ಲೋಹಗಳು ಸೈಲೆಂನಲ್ಲಿ ನೀರಿನ ಮುಖಾಂತರ ಮೇಲುಭಾಗಕ್ಕೆ ಚಲಿಸುತ್ತವೆ.  ಅವು ಎಲೆಗಳನ್ನು ತಲುಪಿದ ಮೇಲೆ ಅಲ್ಲಿ ವಿಂಗಡಿಸಲ್ಪಡುತ್ತವೆ. ಎಲೆಗಳಲ್ಲಿ ಉಪಯೋಗಿಸದೆ ಇರುವ ಲೋಹಗಳು ಎಲೆಗಳಲ್ಲಿ ತಯಾರಾದ ಆಹಾರದ ಜೊತೆಗೆ ಸೇರಿ ಅವುಗಳೊಡನೆ ಫ್ಲೋಯೆಂ ಮುಖಾಂತರ ಕೆಳಭಾಗಕ್ಕೆ ಚಲಿಸುತ್ತವೆ. ಹೀಗೆ ಲೋಹಗಳು ಮೇಲುಭಾಗಕ್ಕೆ ಅಥವಾ ಕೆಳಭಾಗಕ್ಕೆ ಚಲಿಸುವಾಗ ಕೆಲವು ಲೋಹಗಳು ಸೈಲೆಂನಿಂದ ಪ್ಲೋಯೆಂಗೂ ಫ್ಲೋಯೆಂನಿಂದ ಸೈಲೆಂಗೂ ಅಡ್ಡವಾಗಿ ಚಲಿಸಬಹುದು. ಆಹಾರದೊಡನೆ ಕೆಳಭಾಗಕ್ಕೆ ಬಂದ ಲೋಹಗಳು ಮತ್ತೆ ಸೈಲೆಂ ಮುಖಾಂತರ ಮೇಲುಭಾಗಕ್ಕೆ ಚಲಿಸಬಹುದು. ಹೀಗೆ ಸಸ್ಯಗಳಲ್ಲಿ ಲೋಹಗಳ ಚಲನೆ ಒಂದು ವಿಧವಾದ ಪರಿಚಲನೆಯೇ (ಸರ್ಕ್ಯುಲೇಷನ್) ಆಗಿರುತ್ತದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ